Monday, February 13, 2017

ಅಹೊ ಭಾಗ್ಯವಿದು!

ಬಸ್ ಬಂತು ಬಸ್   ಬಂತು..ಎಲ್ಲರೂ ಲಗು ಲಗು ಬರ್ರಿ. ಏ ಒಂದು ನಿಮಿಷ ನನ್ನ luggage check ಮಾಡ್ತಿನಿ...ಏ ಅಜ್ಜಿ ಹತ್ತಿದ್ರಾ...ಹೀಗೆ ಮಾತಿನ ಚಕಮಕಿಯಲ್ಲಿ ಎಲ್ಲರೂ ನಮ್ಮ ರಥವನ್ನು ಏರಿದೆವು.
     ಹರೇ ಶ್ರೀನಿವಾಸ.... ಶ್ರೀಮದ್ ರಮಾ ರಮಣ ಗೋವಿಂದಾ ಗೋವಿಂದಾ ಘೋಷಣೆಗಳು ರೋಮಾಂಚನವನ್ನು ಮೂಡಿಸಿದವು. ಹರಟೆ..ನಗೆ ಚಟಾಕಿಗಳು...ಹಾಡುಗಳ ಮಧ್ಯೆ ಸಮಯ ಮಧ್ಯರಾತ್ರಿ ಮೀರಿದ್ದು ಯಾರಿಗೂ ಅರಿವಾಗಿರಲೇ ಇಲ್ಲ. ತೂಗಿರೇ ರಂಗನ...." ಹಾಡಿನೊಂದಿಗೆ ಎಲ್ಲರೂ ನಿದ್ರಾ ದೇವಿಗೆ ಶರಣಾದರು.
        ಈಗಷ್ಟೇ ನಿದ್ದೆ ಹತ್ತಿದೆ ಅನ್ನೊ ಅಷ್ಟರಲ್ಲಿ..ಬೆಳಕು ಹರಿದಿತ್ತು..ಕಣ್ಣು ತೆರೆದು ನೋಡಿದರೆ ನಮ್ಮ ಬಸ್ ಎಲ್ಲೋ ದೇವಲೋಕದ ಬಾಗಿಲಲ್ಲಿ ಇರುವಂತೆ ಭಾಸವಾಯಿತು. ಮಂಜು ಕವಿದ ದಾರಿ....ಜಿನುಗುವ ಇಬ್ಬನಿ...ಆಹಾ... ದಾರಿ ಮಂಜಿನಿಂದ ಮುಸುಕಿದ್ದರೂ ನಮ್ಮ ಗುರಿ ಸ್ಪಷ್ಟವಾಗಿತ್ತು. ನಿರ್ವಿಘ್ನವಾಗಿ ಮಹಿಷಿಯನ್ನು ತಲುಪಿದೆವು.
         ರಾಮದೇವರ ಸ್ವಾಗತಕ್ಕೆ ಸಜ್ಜಾಗಲು..ಎಲ್ಲರೂ ಲಗುಬಗೆಯಿಂದ ತಮ್ಮ ಪ್ರಾತಃ ಕರ್ಮಗಳನ್ನು ಮುಗಿಸುವುದರಲ್ಲಿ ನಿರತರಾದರು.
         ಸತ್ಯಸಂಧರ ಸನ್ನಿಧಾನ....ಝುಳು ಝುಳು ಹರಿಯುವ ತುಂಗೆಯ ಕಲರವ...ಒಂದು ತಿಂಗಳ ಪುಟ್ಟ ಕರುವಿನ ಹಂಬಾ ಧ್ವನಿ....ಮನಸ್ಸು ಪ್ರಸನ್ನವಾಯಿತು.
         ಮೇಲ್ನೋಟಕ್ಕೆ ಕೋರೆಯುವ ಚಳಿಯಂತೆ ಭಾಸವಾದರೂ ತುಂಗೆಯಲ್ಲಿ ಮೀಯುವಾಗ ಚಳಿಯ ಆಭಾಸವು ಆಗಲಿಲ್ಲ. ಶ್ರೀಗಳು ಬರುವುದು ಇನ್ನೂ ವಿಳಂಬವಾಗುತ್ತದೆ ಎಂದು ತಿಳಿದಾಕ್ಷಣ...ಕೊಂಚ ಸಮಯವಕಲ್ಲುಗಳರ್ಥ ಮಾಡದೆ ಪುರುಷರೆಲ್ಲ ಪಾರಾಯಣದಲ್ಲಿ ಹಾಗೂ ಸ್ತ್ರೀಯರೆಲ್ಲಾ ಪ್ರದಕ್ಷಿಣೆ ನಮಸ್ಕಾರದಲ್ಲಿ ತೊಡಗಿದರು..
       "ಶ್ರೀಗಳು ಶಿವಮೊಗ್ಗೆಯಿಂದ ಹೋರಟಿದ್ದಾರಂತೆ" ಎಂಬ ಘೋಷಣೆ ಕೇಳುತ್ತಿದ್ದಂತೆ ಎಲ್ಲರೂ ಬಾಗಿಲೆಡೆಗೆ ಧಾವಿಸಿದರು. ದರುಶನಕ್ಕಾಗಿ ಎಲ್ಲರಲ್ಲೂ ಇದ್ದ ಆ ಕಾತುರ...ಸೇವೆಗಾಗಿ ಇದ್ದ ತವಕ...ಪುರುಷರೆಲ್ಲರನ್ನೂ ಮಠದಿಂದ ಮುಂದೆ ೧km ಅಷ್ಟು ದೂರಾ ಬಿಸಿಲು...ಕಲ್ಲುಗಳ ಪರಿವಿಲ್ಲದೆ ನಡೆಸಿತು..
ಶ್ರೀಗಳವರ ವಾಹನ ಮಠದ ಗಡಿಯನ್ನು ತಲುಪುತ್ತಿದ್ದಂತೆ ಭಕ್ತ ಸಮೂಹದೊಂದಿಗೆ ಶ್ರೀಗಳವರೂ ಕಾಲ್ನಡೆಗೆಗೆ ಇಳಿದರು. ತಮ್ಮ ಆರಾಧ್ಯದೈವ ತಮ್ಮೊಂದಿಗೆ ಹೆಜ್ಜೆ ಇಡುವುದನ್ನು ಕಂಡು ಭಾವುಕರಾಗಿ ಎಲ್ಲರೂ ಅವರ ಪಾದಕ್ಕೆ ಕಿಂಚಿತ್ತು ಕಾದ ರಸ್ತೆಯ ತಾಪ   ಸೋಕಬಾರದೆಂದು ತಮ್ಮ ತಮ್ಮ ಮೇಲ್ಹೊದಿಕೆಗಳನ್ನು ದಾರಿಯುದ್ದಕ್ಕೂ ಹಾಸಿದರು. ಬಿಸಿಲು ಸೋಕದಂತೆ ಅವರಿಗೆ ಛತ್ರವನ್ನು ಹಿಡಿದರು. ವೈರಾಗ್ಯಕ್ಕೆ ಕಳಶದಂತಿರುವ ನಮ್ಮ ಶ್ರೀಗಳು ಭಕ್ತರ ಭಾವೋದ್ರೇಕವನ್ನು ಕಂಡು ಮಂದಹಾಸ ಬೀರುತ್ತ..‌"ನೆರಳು ಬಂದಿದೆ...ಇನ್ನು ನಡಿಯಿರಿ ಸಾಕು ಎಂದರು". ಸಾಕ್ಷಾತ್ ಬೃಹ್ಮ ಕರಾರ್ಚಿತ  ರಾಮದೇವರನ್ನು ಪೂಜಿಸುವ ಆ ಮಹಾಮಹಿಮರ ಪಾದಧೂಳಿ ತಮ್ಮ ಶಲ್ಯಕ್ಕೆ ಸೋಕಿದ್ದೇ ಮಹಾ ಪುಣ್ಯವೆಂದು..ಎಲ್ಲರೂ ತಮ್ಮ ತಮ್ಮ ಮೇಲ್ಹೋದಿಕೆಗಳನ್ನು ಗುರುಗಳ ರಕ್ಷಾಕವಚದಂತೆ ಧರಿಸಿದರು.
        ಬೆಂಗಳೂರಿನ ಜನದಟ್ಟಣೆಯಲ್ಲಿ ಎಲ್ಲೋ ದೂರದಿಂದ ಅಥವಾ ವಿದ್ಯುತ್ ಪರದೆಗಳ ಮೇಲೆ ದರ್ಶನ ಪಡೆದಿದ್ದ ನಮಗೆ ಶ್ರೀಗಳ ಸಮೀಪದ ದರ್ಶನ ಭಾವುಕರನ್ನಾಗಿ ಮಾಡಿತ್ತು. ಮಂದಸ್ಮಿತಭಾವದಿಂದ ಎಲ್ಲರ ಕಡೆಗೂ ದೃಷ್ಟಿ ಬೀರುತ್ತ ಆಶೀರ್ವದಿಸುತ್ತಿದ್ದ ಶ್ರೀಗಳನ್ನು ನೋಡಿದರೆ ನಮ್ಮನ್ನು ಉದ್ಧರಿಸಲೆಂದೇ ಧರೆಗಿಳಿದು ಬಂದ ಪರಮಾತ್ಮ ಎಂದು ವರ್ಣಿಸಿದರೆ ಅತಿಶಯೋಕ್ತಿ ಆಗಲಾರದು. ಶ್ರೀಗಳು ತಮ್ಮೊಡನೆ ನಮ್ಮೆಲ್ಲರನ್ನೂ  ಪಾದರಸದಂತೆ ಚುರುಕುಗೊಳಿಸಿದ್ದರು. ಅವರ ಭಕ್ತಿ‍,‌ ಅನುಸಂಧಾನಕ್ಕೆ ಅವರೇ ಸರಿಸಾಟಿ. ತುಂಗೆಗೆ ಇಳಿಯುವ ಮುನ್ನ ಸಾಷ್ಟಾಂಗ ನಮಸ್ಕಾರ ಮಾಡಿದರು.   ಅವರಿಂದ ದಂಡೋದಕ ಪಾದೋದಕಗಳನ್ನು ಪಡೆದು ಧನ್ಯರಾದೆವು.
       ಶ್ರೀಮನ್ಮೂಲರಾಮದೇವರ ಪೂಜೆಗೆ ಸಜ್ಜಾದ ಶ್ರೀಗಳು‍‍‍‍, ತ್ರಿವಿಕ್ರಮ ಸಂಭೋದಿಸುವಂತೆ ಮಧ್ವಾಚಾರ್ಯರರಂತೆ ಭಾಸವಾದರು. ಸವಿರತ ೪ ಘನ್ಟೆಗಳ ಕಾಲ ನಡೆದ ಪೂಜೆ...ಮಂತ್ರ ಘೋಷಗಳು...ಝಾಗಟೆಯ ನಾದ...ಆಹಾ ಈ ಜನ್ಮಕ್ಕೆ ಇನ್ನೇನು ಬೇಕು ಅನಿಸಿತು. ಸಂಪೂರ್ಣ ವಾತಾವರಣ ಭಗವನ್ಮಯ...ಲೌಕಿಕದ ರಗಳೆಗಳಿಂದ ಎಷ್ಟೋ ದೂರ ...ಸಂತೃಪ್ತಿಯಾಯಿತು. ಶ್ರೀಗಳ ಕೈಯಿಂದ ತೀರ್ಥ ಸ್ವೀಕರಿಸುವ ಭಾಗ್ಯ ನಮ್ಮದಾಯಿತು...ಧನ್ಯೋಸ್ಮಿ
      ತರುವಾಯ ಎಲ್ಲರೂ ಶ್ರೀಗಳಿಂದ ಕಮಲನಾಭನ ಚಿಹ್ನೆಯನ್ನು ಪಡೆದೆವು. ಪುರುಷರೆಲ್ಲ ಸುಮದ್ವ ವಿಜಯದ ಎರಡು ಶ್ಲೋಕಗಳ ಪಾಠವನ್ನು ಶ್ರೀಗಳಿಂದ ಪಡೆದರು. ನಂತರ ಶ್ರೀಗಳಿಂದ ಅಮೃತೋಪದೇಶ...ಪುರುಷರೆಲ್ಲರೂ ಶ್ರೀಗಳ ಪಾದಸೇವೆಗಾಗಿ ಕಾದು‌...ಅವರ  ಅನುಮತಿಯೊಂದಿಗೆ ಸೇವೆಯ ಭಾಗ್ಯ...ಅವರೊಂದಿಗೆ ಕೆಲ ಕಾಲವಾದರೂ ಒಡನಾಟವನ್ನು ಪಡೆದು ಧನ್ಯರಾದರು. ಮಧ್ವ ಮತಸ್ಥರಿಗೆ ಇದಕ್ಕಿಂತ ಶ್ರೇಷ್ಠ ದಿನ ಇನ್ನೊಂದಿರಲಿಕ್ಕಿಲ್ಲ.
      ದ್ವಾದಶಿಯಂದು ಮಸುಕಿನಲ್ಲಿ ಸ್ನಾನ...ದಂಡೋದಕ...ಪಾದೋದಕ ಗಳು ಆದವು. ಸಂಸ್ಥಾನ ಪೂಜೆ...ಶ್ರೀಗಳಿಂದ ತೀರ್ಥ.. ತದನಂತರ ಮಲೆನಾಡಿನ ಸೊಗಡಿನ ಭವ್ಯ ಪ್ರಸಾದ...ಮಠದ ಮೇಲ್ಛಾವಣಿಯಲ್ಲಿ ಊಟಕ್ಕೆ ಸಜ್ಜು ಮಾಡಲಾಗಿತ್ತು. ಪ್ರತಿಯೊಂದು ವ್ಯಂಜನವು ವಿಭಿನ್ನ ಹಾಗೂ ರುಚಿಕರವಾಗಿದ್ದವು. ಊಟದ ಸಾಲಿಗೆ ಸ್ವಯಂ ಶ್ರೀಗಳು ಬಂದು ಸಿಹಿಯನ್ನು ಬಡಿಸಿದ್ದು ಅವಿಸ್ಮರಣೀಯ. ತದನಂತರ ಶ್ರೀಗಳ ಪಾದಪೂಜೆ‍‍‍, ಫಲ ಮಂತ್ರಾಕ್ಷತೆಯನ್ನು ಎಲ್ಲರೂ ಪಡೆದೆವು.
          ಶ್ರೀಗಳೊಂದಿಗೆ ಸಮೂಹ ಚಿತ್ರ ತೆಗೆಸಿಕೊಂಡ ಪುರುಷರ ಸಂಭ್ರಮಕ್ಕೆ ಎಣೆಯೇ ಇಲ್ಲ. ಕೆಲಕಾಲ ಮಠದಲ್ಲಿ ಕಾಲ ಕಳೆದು..ತಂಡ ತಂಡವಾಗಿ ಬಂದ ಬಳಗದವರನ್ನು ಬಿಳ್ಕೋಟ್ಟು..‌ ಊಟಕ್ಕಿಂತ ಅದ್ಧೂರಿಯಾದ ಉಪಹಾರವನ್ನು ಸ್ವೀಕರಿಸಿ....ಶ್ರೀಗಳಿಗೆ ವಂದಿಸಿ...ಮರಳಿ ಗೂಡಿನೆಡೆಗೆ ಹೆಜ್ಜೆ ಇಟ್ಟೆವು.
         ಅಲ್ಲಿದ್ದ ಪ್ರತಿಯೊಂದು ಕ್ಷಣ ಅವಿಸ್ಮರಣೀಯ. ಸತ್ಯಾಭಿಜ್ಞಾಚಾರ್ಯ ಅವರ ಕುಟುಂಬದ ಎಲ್ಲರ ಸವಿನಯ, ಸಂಯಮಶೀಲ ಪ್ರವೃತ್ತಿ ಎಲ್ಲ ಕಾರ್ಯಕ್ರಮಗಳು ಸುಗಮವಾಗಿ ನೆಡೆಯುವಂತೆ ಮಾಡಿತು.
          ಇಂತಹ ಅಪರೂಪದ..ಅವಿಸ್ಮರಣೀಯ ಯಾತ್ರೆಯನ್ನು ಮಾಡಿಸಿದ ಪರಮಾತ್ಮನಿಗೆ...ಶ್ರೀಗಳಿಗೆ...ನಮ್ಮ ಕುಟುಂಬದ ಹಿರಿಯರಿಗೆ ಹಾಗೂ...ಈ ಕಾರ್ಯಕ್ರಮದ ಮುಂದಾಳುಗಳಿಗೆ ಹಾಗೂ ಕಾರ್ಯದರ್ಶಿಗಳಿಗೆ ನಮ್ಮ ಅನಂತ ವಂದನೆಗಳು.
           ಮೂಲರಾಮದೇವರ ಕೃಪಾಕಟಾಕ್ಷ ನಮ್ಮೆಲ್ಲರ ಮೇಲೆ ಹೀಗೆ ಸದಾ ಇರಲಿ.

              ನಾಹಂ ಕರ್ತಾ ಹರಿಃ ಕರ್ತಾ    
   

No comments:

Post a Comment