Friday, September 26, 2014

Aadhunika Vairaagya

            ಕೆಲವು ತಿಂಗಳುಗಳ ಹಿಂದೆ  ಭಾಗವತ ಸಪ್ತಾಹದಲ್ಲಿ ಆಚಾರ್ಯರು ವೈರಾಗ್ಯದ ದಾರಿ ಯಾವುದು, ಅದನ್ನು ಸಾಧಿಸಿದ ಮಹಾನುಭಾವರ ಉದಾಹರಣೆಗಳನ್ನು ನೀಡುತ್ತಾ ವರ್ತಮಾನ ಜಗತ್ತು ವೈರಾಗ್ಯದ ಸಾಧನೆಗೆ ಕ್ರಮಿಸಬೇಕಾದ ದಾರಿಯ ಬಗೆಗೆಲ್ಲ ವಿವರಿಸಿದರು. ಅವರ ವಾಕ್  ಪ್ರೌಢಿಮೆಯಿಂದ  ವಿಷಯವು ನಮ್ಮ ಮನ ಕಲುಕಿ "ವೈರಾಗ್ಯ"ದ ಬಗ್ಗೆ ವಿಚಾರ ವಿಶ್ಲೇಷಣೆ ಮಾಡುವಂತೆ ಮಾಡಿತು.
           ದೈನಂದಿನ ಜೀವನದಲ್ಲಿ ಯಾರಾದರೂ ಯಾವುದಾದರೂ ವಿಷಯದಲ್ಲಿ ನಿರಾಸಕ್ತಿ ಹೊಂದಿದರೆ ಅದನ್ನೇ ನಾವು ವೈರಾಗ್ಯ ಬಂದಿದೆ ಅವರಿಗೆ ಎನ್ನುತ್ತೇವೆ ಅಥವಾ ಅದನ್ನೇ ತಮಾಷೆ ಮಾಡುತ್ತೇವೆ.
            ಮೊನ್ನೆ ಹೀಗೆ ಮಾತು ಮಾತಲ್ಲಿ ನನ್ನ ನಮ್ಮ ಯಜಮಾನರ ಚರ್ಚೆ ವೈರಾಗ್ಯದೆಡೆಗೆ ಸಾಗಿತು. "ವೈರಾಗ್ಯ" ಎನ್ನುವುದು ನಮ್ಮ ಹಾಗೂ ಇನ್ನೊಂದು  ವಸ್ತು ಅಥವಾ ಒಬ್ಬ ವ್ಯಕ್ತಿಯ ನಡುವಿನ ಸಂಬಂಧದ ಪರಾಕಾಷ್ಠತೆಯನ್ನು ವಿವರಿಸುತ್ತದೆ. ಮಂಜಿನ ಹನಿಯು ಎಲೆಯ ಮೇಲೆ ಇರುವಂತೆ ..... "ಇರಬೇಕು.. ಆದರೂ  ಇಲ್ಲದಿರಬೇಕು " ಎಂಬಂತೆ!!!
             ಪ್ರಸಕ್ತ ಆಧುನಿಕ ಬದುಕನ್ನು ಕೊಂಚ ಬಿಡಿಸಿ ನೋಡಿದರೆ ನಮಗರಿಯದಂತೆ ನಾವೇ ವೈರಾಗಿಗಳಾಗಿ ಬಿಟ್ಟಿದ್ದೇವೆನೋ ಎಂಬಂತೆ  ಭಾಸವಾಗುತ್ತದೆ!!!
             ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಬಳಸುವವರಿಗೆ ಇದರ ಅನುಭವವಾಗಿರುತ್ತದೆ. ಹಣದ ವ್ಯಾಮೋಹವೇ ಇಲ್ಲವೇನೋವೆಂಬಂತೆ...  ಸಾವಿರ, ಲಕ್ಷಗಟ್ಟಲೇ ಹಣ ಕ್ಷಣಾರ್ಧದಲ್ಲಿ ಖರ್ಚಾದರೂ ಯಾವುದೇ ಚಿಂತೆಯ ಒಂದು ಗೆರೆಯೂ ಮುಖದ ಮೇಲೆ ಮೂಡಿರುವುದಿಲ್ಲ. ನಿರ್ಲಿಪ್ತರಾಗಿರುತ್ತೀವಿ. ತಂತ್ರಜ್ಞಾನವೂ ನಮ್ಮನ್ನು ವೈರಾಗ್ಯದೆಡೆಗೆ ಕರೆದೊಯ್ಯುತ್ತಿದೆಯೋ ಎಂಬಂತೆ ನಮ್ಮ ಖಾತೆಯಿಂದ ಹಣ ಕಡಿತವಾಗುವ "ಕ್ಷಣಾರ್ಧದ" ಅವಧಿಯನ್ನು ಆದಷ್ಟು  ನಿರ್ಲಕ್ಷಿಸುವಷ್ಟು ಮಟ್ಟಿಗೆ ತ್ವರಿತವಾಗಿ ಕಾರ್ಯ ನಿರ್ವಹಿಸುತ್ತದೆ. ಅದೇ ತರಕಾರಿಯವನಿಗೆ ೧೨ ರೂಪಾಯಿ ಚಿಲ್ಲರೆ ಎಣಿಸಿ ಕೊಡಬೇಕಾದರೆ ನೂರೆಂಟು ಚೌಕಾಸಿ ಮಾಡುತ್ತೇವೆ. ಇದರರ್ಥ ತಂತ್ರಜ್ಞಾನ ಒಂದು ರೀತಿಯಲ್ಲಿ ವೈರಾಗ್ಯದ ಮಾಧ್ಯಮವಾಗಿದೆ. :-)
            ವೈರಾಗಿಯಾದವನಿಗೆ ಯಾವುದರ ಮೋಹವೂ ಸಲ್ಲದಂತೆ. ಬಹುಶಃ ಅದೇ ಕಾರಣವೇನೋ ಬಹುತೇಕ ಜನರಿಗೆ ತಾವು ತೊಡುವ ಬಟ್ಟೆಯ ಬಗ್ಗೆ ಅಷ್ಟು ನಿರ್ಲಕ್ಷತೆ ಇರುವುದು. ಮೇಲೆ ಹೇಳಿದಂತೆ ಹಣದ ವ್ಯಾಮೋಹವಂತೂ ಇಲ್ಲದಾಗಿದೆ..ಅದಕ್ಕೆ ಸಾವಿರಾರು ರೂಪಾಯಿ ಸುರಿದು ತುಂಡು ತುಂಡು ಬಟ್ಟೆ ಧರಿಸುತ್ತಾರೆ. ನಮ್ಮ ವಿಷ್ಣುವರ್ಧನ  ಹಾಡಿನಂತೆ "ತುಂಡು ಬಟ್ಟೆ ಸಾಕು ಮಾನಾ ಮುಚ್ಚೋಕೆ "
                       ಇನ್ನೂ ಕೆಲವು ಕ್ಷಣಿಕ ವೈರಾಗ್ಯಗಳಿವೆ. ಪುರಾಣ ಕೇಳುವಷ್ಟು ಹೊತ್ತು ಇನ್ನೇನೂ ಮರುಕ್ಷಣನೇ ನಾವು ಎಲ್ಲವನ್ನೂ ತ್ಯಜಿಸಿ ಬಿಡುತ್ತಿವೇನೋ ಅಂದುಕೊಳ್ಳುವಷ್ಟರಲ್ಲಿ "ನಾನು ಪುರಾಣಕ್ಕೆ ಬರಬೇಕಾದರೆ ರಾಜಸ್ಥಾನಿ embroidery ಇದ್ದ ಕೆಂಪು ಬಣ್ಣದ ವೆಲ್ವೆಟ್ ಬಟ್ಟೆಯ bag ಒಂದನ್ನು ತಂದಿದ್ದೆನಲ್ಲ ...ಎಲ್ಲಿ ಹೋಯ್ತು " ಅಂತ ನಮ್ಮ ನಿಜರೂಪಕ್ಕೆ ಬರುತ್ತೇವೆ
              ನಮ್ಮ ಆಪ್ತರಲ್ಲಿ ಯಾರಾದರೂ ಮೃತರಾದಾಗ ಅಥವಾ ವಾರ್ತೆಯಲ್ಲೋ ಇನ್ನೆಲ್ಲೋ ನಡೆದ ದುರ್ಘಟನೆಯ ಬಗ್ಗೆ ಕೇಳಿದಾಗ  "ಜೀವನ  ಇಷ್ಟೇ ... ನಮ್ಮ ಉಸಿರು ನಮ್ಮೊಡನೆ ಇದ್ದರೂ ಬಾಂಧವ್ಯ ಮುಕ್ತವಾಗಿರುತ್ತದೆ ". ಹೀಗೆ ಯೋಚಿಸುತ್ತ ಮಾರ್ಗ ಮಧ್ಯೆ ಒಂದು ಸೈಕಲ್ ನ ಹೊಡೆತದಿಂದ ತಪ್ಪಿಸಿಕೊಂಡರೂ "ಅಬ್ಬಾ ...ಬದುಕಿದೆಯಾ ಬಡ ಜೀವವೇ ಎಂದು ನಿಟ್ಟುಸಿರೆಳೆಯುತ್ತೇವೆ ".
           . ಯಾವುದೇ ರೀತಿಯ ಅಭಾವದ ಸಮಯದಲ್ಲಿ ನಮ್ಮ ವೈರಾಗ್ಯ "ನರಿಯ ಹುಳಿ ದ್ರಾಕ್ಷಿಯ" ಕಥೆಯಂತಿರುತ್ತದೆ. ಅದೇ ಹೊಟ್ಟೆ ತುಂಬಿದಾಗ ಹುಳಿಯಲ್ಲದ ದ್ರಾಕ್ಷಿ  ಎದುರಿಗಿದ್ದರೂ ಬೇಡವೆನಿಸಿ ಉದರ ವೈರಾಗಿಗಳಾಗುತ್ತೇವೆ.
             ಪ್ರಸವದ ಸಮಯದಲ್ಲಿ ತಾಯಿಗೆ ಆ ಯಾತನೆ ತಾಳಲಾರದೆ "ಸಾಕಪ್ಪ ಈ ಜೀವನ" ಅನಿಸುತ್ತದೆ... ಮಗು ಜಗಕೆ ಬಂದ ಕ್ಷಣ "ಆಜ್ ಫಿರ್ ಜೀನೆ ಕಿ ತಮನ್ನಾ ಹೇ .... ಹಾಡು ನೆನಪಾಗುತ್ತದೆ  " :)    ಇದು "ವ್ಯಕ್ತಿ ವೈರಾಗ್ಯ"ಕ್ಕೆ ನಾಂದಿ ಹಾಡಾಗುತ್ತದೆ.  ಇದಕ್ಕೆ ಪೂರಕವಾಗಿ ಕಂಡಕಂಡಲ್ಲಿ "day care center" ಗಳು ತಲೆ ಏಳುತ್ತಿವೆ. ಪ್ರತಿಯೊಬ್ಬರೂ ಯಂತ್ರಿಕ ಬದುಕಿನ ಓಟದಲ್ಲಿ ಪಾಲ್ಗೊಳ್ಳಲು ಹಸು ಕಂದಮ್ಮಗಳ ಲಾಲನೆ ಪಾಲನೆಗೆ  ಇಂತಹ center ಗಳಿಗೆ ಮೊರೆಹೋಗುತ್ತಾರೆ.
              ವಿಪರ್ಯಾಸವೆಂದರೆ ಕೆಲಸಕ್ಕೆ ಹೋಗುವ  ಮಹಿಳೆಯೊಬ್ಬಳು "ನಾನು ಮಗುನ ಅಜ್ಜಿ ಮನೇಲಿ ಬಿಟ್ಟು office ಗೆ ಹೋಗುತ್ತೀನಿ  ಅಂದರೆ" .... "ಅಜ್ಜಿ ಮನೆ" ಎನ್ನುವುದು ಒಂದು day care center ನ ಹೆಸರು ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. :-)
              ಈ ಪ್ರಕ್ರಿಯೆಯಲ್ಲಿ ತಂದೆ ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯದ ಸರಪಳಿ ದುರ್ಬಲವಾಗುತ್ತದೆ. ತಾಯಿಯ ಹಾಲನ್ನೂ ಸಹ ಶೇಖರಿಸಿ ಮಗು ಅತ್ತಾಗ ಕುಡಿಸುವ ಕಾಲ ಬಂದಿರುವಾಗ ಆ ಮಗುವಿಗೆ ಆ ಶಿಶುಪ್ರಾಯದಿಂದಲೇ ವೈರಾಗ್ಯ ಬಂದು ಬಿಡುತ್ತದೆ. ಅದೇ ಕಾರಣವೋ ಏನೋ ತಂದೆ ತಾಯಿಗಳನ್ನು ವ್ರದ್ಧಾಶ್ರಮಕ್ಕೆ ಸಲೀಸಾಗಿ ಕಳುಹಿಸುತ್ತಾರೆ. ಇದನ್ನು ಪ್ರಾಯಶಃ ಸಾಂದರ್ಭಿಕ ವೈರಾಗ್ಯ ಎನ್ನಬಹುದು. :-)
             
            "ಇದ್ದು ಇಲ್ಲದಂತಿರುವುದು"  ಶಾಶ್ವತ ವೈರಾಗ್ಯವಾಗಿರಬೇಕು. ಸಂದರ್ಭಗಳ ಬವಣೆಯಲ್ಲಿ ತೊಳಲಾಡುತ್ತಿರುವ  ನಮ್ಮಂತಹ ಸಾಮಾನ್ಯರು ಮಾನಸಿಕ ಗೊಂದಲದಲ್ಲಿ ಸಿಲುಕಿ ನಮ್ಮೊಳಗೆ  ನಾವು
 ಸೆಣಸಾಡುತ್ತಿದ್ದೇವೆ. ವೈರಾಗ್ಯದ ನಿಜ ಅರ್ಥವನ್ನೇ ಮರೆಮಾಚುವ ಇಂಥಹ ಋಣಾತ್ಮಕ ಬೆಳವಣಿಗೆಯಿಂದ  ನೈಜ ವೈರಾಗ್ಯವನ್ನು ಸಾಧಿಸಲು ಎಮಗೆ "ಹರಿ ಸ್ಮರಣೆ" ಒಂದೇ ದಾರಿ ......

ಈ ವಿಶ್ಲೇಷಣೆ ಒಂದು ವಿಡಂಬನೆಯಷ್ಟೇ !!!! ವೈಯಕ್ತಿಕ ದೂಷಣೆಯಲ್ಲ...  
            

Sunday, June 29, 2014

Chippagiriya Nilaya..

                       ಹಿಂದೊಮ್ಮೆ ಯಜ್ಞ ಮಾಡುವ ಸಮಯದಲ್ಲಿ ಹವಿಸ್ಸನ್ನು ಯಾರಿಗೆ ಅರ್ಪಿಸಬೇಕು ಎನ್ನುವ ಪ್ರಶ್ನೆ ಬಂದಿತು. ಆಗ ನಾರದರು ಭೃಗು   ಋಷಿಗಳಿಗೆ ಸೂಚಿಸಿದಂತೆ,  ಭೃಗು ಋಷಿಗಳು ಒಮ್ಮೆ ಬ್ರಹ್ಮ, ವಿಷ್ಣು , ಮಹೇಶ್ವರರಲ್ಲಿ ಯಾರು ಶ್ರೇಷ್ಟರು ಎಂದು ತಿಳಿಯಲು ಮೂರು ಲೋಕಕ್ಕೆ ಹೋಗುವ ನಿರ್ಧಾರ ಮಾಡಿದರು. ಮೊದಲು ಕೈಲಾಸಕ್ಕೆ ಮಹೇಶ್ವರನ ಬಳಿ ಹೋದಾಗ ಅವನು ಇವರು ಬಂದಿದ್ದನ್ನು ಗಮನಿಸದಿದ್ದಕ್ಕೆ "ನಿನಗೆ ಭೂಮಿ ಮೇಲೆ ಲಿಂಗ ಪೂಜೆ ಮಾತ್ರ ಲಭಿಸುವುದೆಂದು" ಶಾಪವಿತ್ತರು. ಬ್ರಹ್ಮಲೋಕಕ್ಕೆ ಹೋದಾಗ ಬ್ರಹ್ಮ ಇವರನ್ನು ನಿರ್ಲಕ್ಷಿಸಿದ ಕಾರಣ "ನಿನಗೆ ಮೂರ್ತಿ ಪೂಜೆ ಸಲ್ಲದು" ಎಂದು ಶಾಪವಿತ್ತರು.  ಇನ್ನೂ ವಿಷ್ಣು ಸ್ಥಾನ ವೈಕುಂಠಕ್ಕೆ ಹೋದಾಗ, ವಿಷ್ಣುಗೆ ಅವರ ಆಗಮನದ ಆಭಾಸವಾಗಿದ್ದರೂ ನಿದ್ರಾವಸ್ಥೆಯಲ್ಲಿರುವಂತೆ ನಟಿಸುತ್ತಿದ್ದನು. ಇದನ್ನು ಕಂಡು ಕೆಂಡಾಮಂಡಲರಾದ ಮುನಿಗಳು ವಿಷ್ಣುವಿನ ವಕ್ಷಸ್ಥಳಕ್ಕೆ ಒದೆಯುತ್ತಾರೆ. ತಕ್ಷಣ ವಿಷ್ಣು ನನ್ನ ಅಪರಾಧವನ್ನು ಮನ್ನಿಸಿ ಎಂದು ಮುನಿಗಳ ಚರಣಕ್ಕೆರಗಿ, ಅವರ ಪಾದದ ಅಡಿ ಇದ್ದ ಅಹಂಕಾರದ ಕಣ್ಣನ್ನು ಕಿತ್ತೆಸೆಯುತ್ತಾನೆ. ಈ ಕಡೆ ಲಕ್ಷ್ಮೀದೇವಿ ತನ್ನ ವಾಸಸ್ಥಳಕ್ಕೆ ಮುನಿಗಳು ಅವಮಾನ ಮಾಡಿದರೂ ತನ್ನ ಸ್ವಾಮಿ ಅವರ ಪಾದಗಳಿಗೆ ಎರಗಿದ್ದನ್ನು ಕಂಡು ಮುನಿಸಿಕೊಂಡು ಭೂಲೋಕಕ್ಕೆ ಬಂದು ಬಿಡುತ್ತಾಳೆ.  ಅವಾಗ ಮುನಿಗಳು ಶಾಂತ ಸ್ವರೂಪರಾಗಿ, ತಮ್ಮ ಉದ್ಧಟ ತನಕ್ಕೆ ಪಶ್ಚಾತಾಪ ಪಡುತ್ತಾರೆ. ಆಗ ವಿಷ್ಣು "ನೀವು ಪರಿತಪಿಸುವ ಅಗತ್ಯವಿಲ್ಲ, ನಾನು ತಾಯಿ ಯಶೋಧೆಗೆ ಹಾಗು ದೇವಿ ವೇದವತಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಭೂಲೋಕದಲ್ಲಿ ಅವತರಿಸಲು ನೀವು ಕಾರಣ ನಿಮಿತ್ತರು ಅಷ್ಟೇ ".  ಮುಂದೆ ಭಗವಾನ್ ವಿಷ್ಣುವು ಶ್ರೀನಿವಾಸನಾಗಿ ಅವತರಿಸಿ ಬಕುಳೆಯ ರೂಪದಲ್ಲಿ ತಾಯಿ ಯಶೋಧೆಗೆ ಕೊಟ್ಟ ಮಾತನ್ನು, ಪದ್ಮಾವತಿಯ ಕೈ ಹಿಡಿದು ವೇದವತಿಗೆ ಕೊಟ್ಟ ಮಾತನ್ನೂ ಈಡೇರಿಸಿದನು. ವಿಷ್ಣುವು ಭೃಗು ಋಷಿಗಳಿಗೆ "ಲೋಕ ಕಲ್ಯಾಣಕ್ಕಾಗಿ ತಾವು ಭೂಲೋಕದಲ್ಲಿ ಅವತರಿಸುವ ಅಗತ್ಯವಿದೆ ಎಂದನು ". 
                        ಸ್ವಾಮಿಯ ಆಜ್ಞೆಯಂತೆ ಭೃಗು ಋಷಿಗಳು ಮೊದಲು ಪುರಂದರ ದಾಸರ ಮನೆಯಲ್ಲಿ ಕರುವಾಗಿ ಜನಿಸಿದರು. ನಂತರ ಅವರ ಎರಡನೆಯ ಮಗ "ಮಧ್ವ ವಿಠ್ಠಲ" ನಾಗಿ ಜನಿಸಿದರು. ಪುರಂದರ ದಾಸರು ೪,೨೫,೦೦೦ (ಅಥವಾ ೪,೭೫,೦೦೦ ಎಂದು ವಿವಿಧ ಅಭಿಪ್ರಾಯಗಳಿವೆ) ಕ್ರತಿಗಳನ್ನು ರಚಿಸಿದರು. ೫,೦೦,೦೦೦ ಕೃತಿಗಳನ್ನು ರಚಿಸಬೇಕೆನ್ನುವುದು ಅವರ ಸಂಕಲ್ಪವಾಗಿತ್ತು. ಉಳಿದ ಕ್ರತಿಗಳು ತಮ್ಮ ಮಗನಿಂದ ರಚನೆಯಾಗುವವು ಎಂದರು. ಆ ಕಾರ್ಯ ಸಂಪೂರ್ಣವಾಗಲೆಂದೇ "ಚೀಕಲಪರವಿ" ಎಂಬ ಗ್ರಾಮದಲ್ಲಿ ದಾಸಪ್ಪನೆಂಬ ಹೆಸರಿನಿಂದ ಪುರಂದರ ದಾಸರ ಮಗ ಮತ್ತೆ ಜನಿಸಿದರು. ೩೨ ವರ್ಷಗಳ ಕಾಲ ಪ್ರಾರಭ್ಧ  ಕರ್ಮಗಳನ್ನು ಅನುಭವಿಸುತ್ತ, ಬಡವ ಸಹಜ ಜೀವನವನ್ನು ನಡೆಸುತ್ತಿದ್ದರು. ಹೀಗೊಂದು ದಿನ ರಾತ್ರಿ ಕನಸಿನಲ್ಲಿ ಪುರಂದರ ದಾಸರು ನಾರದರ ತಂಬೂರಿಯನ್ನು ದಾಸಪ್ಪನಿಗೆ ಕೊಟ್ಟಂತೆ ಆಯಿತು. "ಚಿಪ್ಪಗಿರಿಯ ವಿಜಯದಾಸರ ಕಟ್ಟೆಯಲ್ಲಿ" ಈ ತಂಬೂರಿಯನ್ನು ಈಗಲೂ ನೋಡಬಹುದು . ಹಾಗೂ ಸತ್ಯಭೋಧ ಸ್ವಾಮಿಗಳ ಪಾದುಕೆಗಳು ಅಲ್ಲಿವೆ

ವೇದವ್ಯಾಸರು ಇವರ ನಾಲಿಗೆಯ ಮೇಲೆ "ವಿಜಯ" ಎಂದು ಬರೆದರು. ಇದೆ ಮುಂದಿನ ದಾಸಸಾಹಿತ್ಯದ ಬೆಳವಣಿಗೆಗೆ ನಾಂದಿಯಾಯಿತು. ಅಂದಿನಿಂದ ದಾಸಪ್ಪನು "ವಿಜಯ ವಿಠ್ಠಲ" ನಾಮಾಂಕಿತದೊಂದಿಗೆ ಕ್ರತಿಗಳನ್ನು ರಚಿಸಲು ಆರಂಭಿಸಿದರು. ಇವರೇ "ವಿಜಯದಾಸರು". ದಾಸ ಸಾಹಿತ್ಯದ ಅಭಿವೃದ್ಧಿಯ ಚುಕ್ಕಾಣಿ ಹಿಡಿದರು. ಇವರ ಶಿಷ್ಯ ವೃಂದದಲ್ಲಿ ಪ್ರಮುಖರು ಗೋಪಾಲದಾಸರು. ಅಲ್ಲದೆ ಹಲವು ಸುಧಾ ಪಂಡಿತರೂ ಇವರ ಶಿಷ್ಯರಾಗಿ ದಾಸ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. 






ಶ್ರೀಪಾದರಾಜರು ಪ್ರತಿಷ್ಠಾಪಿಸಿದ ನರಸಿಂಹ ದೇವರು




 ವಿಜಯದಾಸರು ಈ ಮರದ ಅಡಿಯಲ್ಲಿ ಕುಳಿತು ಕ್ರತಿಗಳನ್ನು ರಚಿಸಿದ್ದರು. ಅವರೇ ಪ್ರತಿಷ್ಠಾಪಿಸಿದ ಪ್ರಾಣದೇವರ ವಿಗ್ರಹ ಇಲ್ಲಿದೆ. ಒಂದು ಅಂಶದಿಂದ ತಾವು ಸದಾ ಈ ಜಾಗದಲ್ಲಿ ಇರುವೆನೆಂದು ಹೇಳಿದ್ದರು. ಅದಕ್ಕೆ ಆ ಮರದ ಭಾಗಕ್ಕೆ ನಿತ್ಯ ಪೂಜೆ ಸಲ್ಲುತ್ತದೆ

                        ಚೀಕಲಪರವಿಯಲ್ಲಿ ಶ್ರೀನಿವಾಸಾಚಾರ್ ಎಂಬ ಸುಧಾ ಪಂಡಿತರಿದ್ದರು. ಒಮ್ಮೆ ವಿಜಯದಾಸರು ಆಚಾರ್ಯರನ್ನು ತಮ್ಮ ಮನೆಗೆ ತೀರ್ಥ ಪ್ರಸಾದಕ್ಕೆ ಬರುವಂತೆ ಆಹ್ವಾನಿಸಿದರು. ಆಚಾರ್ಯರು ಮನೆಗೆ ಬಂದು ತಮ್ಮ ಮಡದಿಗೆ ಹೇಳಿದರು "ಸುಧಾ ಪಂಡಿತನಾದ ನಾನು ಆ ಯಖಶ್ಚಿತ್  ದಾಸನ ಮನೆಗೆ ತೀರ್ಥ ಪ್ರಸಾದಕ್ಕೆ ಹೋಗುವುದೇ.... ಅಸಾಧ್ಯ...ನೀನೇ ಏನಾದರು ನೆಪ ಹೇಳಿ ಬಿಡು ಎಂದರು ". ಇತ್ತ ಮಂಗಳಾರತಿಯ ಸಮಯವಾದರೂ ಆಚಾರ್ಯರು ಬರದಿದ್ದನ್ನು ಕಂಡು ವಿಜಯದಾಸರು ತಮ್ಮ ಶಿಷ್ಯ  ಗೋಪಾಲದಾಸರಿಗೆ ವಿಚಾರಿಸಿಕೊಂಡು ಬರಲು ಕಳುಹಿದರು. ಆಚಾರ್ಯರ ಮಡದಿ "ಆಚಾರ್ಯರ ಊಟವಾಗಿ ಮಲಗಿದ್ದಾರೆ. ಅವರಿಗೆ ೧೧ ಘಂಟೆ ಮಿಕ್ಕಿದ ಮೇಲೆ ಊಟ ಮಾಡಿದರೆ ಹೊಟ್ಟೆ ನೋವು ಬರುತ್ತದೆ. ಅದಿಕ್ಕೆ ಭೋಜನ ಮುಗಿಸಿದರು." ಎಂದು ಹೇಳಿದರು.  ಗೋಪಾಲದಾಸರು ಮರಳಿ ಬಂದು ವಿಜಯದಾಸರಿಗೆ ವಿಷಯವನ್ನು ತಿಳಿಸಿದರು. ವಿಜಯದಾಸರು ಅಪರೋಕ್ಷ ಜ್ಞಾನಿಗಳು. ಅವರಿಗೆ ಸತ್ಯ ತಿಳಿದಿತ್ತು. ಇತ್ತ ಮಲಗಿದ ಶ್ರೀನಿವಸಾಚಾರ್ಯರು ತೀವ್ರ ಉದಕ ಬೇನೆಯಿಂದ ನಿದ್ದೆ ಇಂದ ಎಚ್ಚೆತ್ತರು. ಯಾವುದೇ ಮನೆ ಮದ್ದಿನಿಂದ ನೋವು ಶಮನವಾಗಲಿಲ್ಲ. ಈ ಶ್ರೀನಿವಸಾಚಾರ್ಯರು ಬೇರೆ ಯಾರು ಅಲ್ಲ "ಸಹ್ಲಾದ"ರು. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಪ್ರಹ್ಲಾದರಾದಾಗ  ಶ್ರೀನಿವಾಸಚಾರ್ಯರು ಅವರ ಸಹೋದರ ಸಹ್ಲಾದರು. ಆಚಾರ್ಯರು ನೋವಿನ  ಶಮನಕ್ಕೆ ರಾಯರ ಮೊರೆ ಹೊಕ್ಕರು. ಅದಕ್ಕೆ ರಾಯರು ನೀನು ಎಲ್ಲಿ ತಪ್ಪೆಸಗಿದ್ದಿಯೋ ಅಲ್ಲಿಗೆ ಹೋಗಿ ಕೇಳು, ಪರಿಹಾರ ದೊರೆಯುತ್ತದೆ ಎಂದರು. ಕೂಡಲೇ ಆಚಾರ್ಯರು ಗೋಪಾಲದಾಸರ ಬಳಿಗೆ ತೆರಳಿದರು. ಗೋಪಾಲದಾಸರು ವಿಜಯದಾಸರಿಂದ ಅಪರೋಕ್ಷ ಸಮ್ಮತಿಯನ್ನು ಪಡೆದು ಅವರ ಅನುಮತಿಯಂತೆ ಧನ್ವಂತರಿ ಸುಳಾದಿ ಹೇಳುತ್ತಾ ಭಕ್ಕರಿಯಲ್ಲಿ  ಔಷಧಿಯನ್ನು ಇಟ್ಟು ಆಚಾರ್ಯರಿಗೆ ಕೊಟ್ಟರು. ಅದೂ ನಿಷ್ಪ್ರಯೋಜಕವಾಯಿತು. ತಕ್ಷಣ ಗೋಪಾಲದಾಸರೊಂದಿಗೆ ತಿರುಪತಿಗೆ ತೆರಳುತ್ತಾರೆ. ಅಲ್ಲಿ ಸ್ವಯಂ ತಿಮ್ಮಪ್ಪನೇ ಗೋಪಾಲದಾಸರ ರೂಪದಲ್ಲಿ ಬಂದು ಆಚಾರ್ಯರಿಗೆ ಔಷಧಿಯನ್ನುಇತ್ತನು. ಆದರೂ ಅವರ ನೋವು ಶಮನವಾಗಲಿಲ್ಲ. ಇದು ಅವರ ಅಂತ್ಯಕಾಲದ ಮುನ್ಸೂಚನೆಯೆಂದು ವಿಜಯದಾಸರು ಅರಿತು, ಗೋಪಾಲದಾಸರಿಗೆ ತಮ್ಮ ಆಯಸ್ಸಿನಿಂದ ೪೦ ವರ್ಷಗಳನ್ನು ಆಚಾರ್ಯರಿಗೆ ಕೊಡುವಂತೆ ತಿಳಿಸದರು. ಹೀಗೆ ಶ್ರೀನಿವಾಸಚಾರ್ಯರು ಮರುಜನ್ಮ ಪಡೆದರು. ತಕ್ಷಣ ಅವರು ವಿಜಯದಾಸರ ಶಿಷ್ಯರಾಗಿ ತಮಗೆ ಅಂಕಿತನಾಮವನ್ನು ನೀಡುವಂತೆ ಕೋರಿದರು. ಆಗ ವಿಜಯದಾಸರು "ಪಂಢರಪುರಕ್ಕೆ ತೆರಳಿ..ನಿಮ್ಮ ಅಂಕಿತ ನಿಮಗೆ ಅಲ್ಲೇ ದೊರೆಯುತ್ತದೆ ಎಂದರು". ಆಚಾರ್ಯರು ಪಂಢರಪುರಕ್ಕೆ ತಮ್ಮ ಅಂಕಿತವನ್ನರಸಿ ಹೊರಟರು. ಅಲ್ಲಿಯ ನದಿಯ ಬಂಡೆಯ ಮೇಲೆ "ಜಗನ್ನಾಥ" ಎಂದು  ಬರೆದಿತ್ತು.. ಅದೇ ಅವರ ಅಂಕಿತವಾಯಿತು. ವಿಜಯದಾಸರನ್ನು ಹೊಗಳಿ "ರತುನ ದೊರಕಿತು ...ವಿಜಯದಾಸರೆಂಬ ರತುನ ದೊರಕಿತು" ಎಂಬ ಕೃತಿಯನ್ನು ರಚಿಸಿದರು. ಮುಂದೆ  "ಹರಿಕಥಾಮೃತ ಸಾರ" ವನ್ನು ರಚಿಸಿದರು. ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ  ಅವರ ಸನ್ನಿಧಾನವಿದೆ. . 
                        ಒಂದು ದಿನ ಪಾಠ ಮಾಡುತ್ತಿದ್ದ ವಿಜಯದಾಸರು ತ್ವರಿತದಲ್ಲಿ ಎಲ್ಲಿಗೋ ಹೊರಟು ಹೋದರು. ಗೋಪಾಲದಾಸರು ತಕ್ಷಣ ಕಾರಣ ಅರಿತರು. ಕಲ್ಲೂರು ಸುಬ್ಬಣ್ಣಾಚರ್ ಮನೆಯಲ್ಲಿ ಸುಧಾ ಮಂಗಳವಿತ್ತು. ಆಚರ್ಯರೂ ಸ್ವಯಂ ಮಹಾ ಸುಧಾ ಪಂಡಿತರು. ೭ ದಿನದ ಸುಧಾಪಾಠದ ತರುವಾಯ ಅಂದು ಸುಧಾಮಂಗಳವಿತ್ತು . ಎಲ್ಲರಿಗೂ ವಿಶೇಷ ಮಂಡಿಗೆ ಭೋಜನದ ಆಮಂತ್ರಣವಿತ್ತು. ಹೀಗಿರುವಾಗ ಅವರ ಮನೆ ಅಡಿಗೆಯವನು ನಾಪತ್ತೆ ಆಗಿದ್ದ. ಸುಬ್ಬಣ್ಣಾಚಾರ್  ದಂಪತಿಗಳು ಚಿಂತಾಕ್ರಾಂತರಾಗಿದ್ದರು. ಅಡುಗೆಯವನಿಗೆ ಮೈಲಿಗೆ ಬಂದಿರುವ ವಿಷಯ ವಿಜಯದಾಸರಿಗೆ ತಿಳಿಯಿತು. ಅದಿಕ್ಕೆ ಅವರು ಅಡಿಗೆಯವನಾಗಿ ಅಲ್ಲಿಗೆ ತೆರಳಿದರು.  ಆಚಾರ್ಯರ ಹೆಂಡತಿ ಕೆಲಸ ಶುರು ಮಾಡುವಂತೆ ಹೇಳಿದರು. ಆ ಸಮಯದಲ್ಲಿ ಆಚಾರ್ಯರು ಯಾವುದೋ ಒಂದು ಕಠಿಣ ಶ್ಲೋಕದ ಅರ್ಥವನ್ನು ವಿಸ್ತಾರ ಮಾಡುವ ಪ್ರಯತ್ನದಲ್ಲಿದ್ದರು. ಅದನ್ನು ಮಂಗಳದ ಸಭೆಯಲ್ಲಿ ಹೇಳಬೇಕಾಗಿತ್ತು. ವಿಜಯದಾಸರು ಆಚಾರ್ಯರನ್ನು ಕುರಿತು "ನನ್ನಿಂದೇನಾದರು ಸಹಾಯವಾದಿತೇ  ಆಚಾರ್ಯರೇ? " ಎಂದು ಕೇಳಿದ್ದಕ್ಕೆ ಕೋಪಿಸಿಕೊಂಡ ಆಚಾರ್ಯರು "ನಿನ್ನ ಕೆಲಸ ನೋಡಿಕೋ ಹೋಗು" ಎಂದು ಗದರಿದರು.
                       ೩೦೦೦ ಮಂಡಿಗೆಗಳು ಕ್ಷಣಾರ್ಧದಲ್ಲಿ ತಯಾರಾದವು. ಸಭೆ ಪ್ರಾರಂಭವಾಯಿತು. ಆಚಾರ್ಯರು ಸುಧಾ ಪಾಠ ಮಾಡುವಾಗ ಆ ಕಠಿಣ ಶ್ಲೋಕವನ್ನು ಬಿಟ್ಟು ಮುಂದಿನ ಶ್ಲೋಕದ ವಿವರಣೆಯನ್ನು ಮುಂದುವರಿಸಿದರು. ಅಲ್ಲೇ ಒಂದು ಮೂಲೆಯಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ವಿಜಯದಾಸರು ತಕ್ಷಣ "ಆಚಾರ್ಯರೇ ಆ ಶ್ಲೋಕದ ವಿವರಣೆಯನ್ನು ತಿಳಿಸಿ ..ಅದು ಬಹಳ ಮಹತ್ವದ ಶ್ಲೋಕ ಎಂದರು". ಇದರಿಂದ ಕೋಪೋದ್ರೇಕರಾದ ಆಚಾರ್ಯರು "ಏನು  ನಿನ್ನ ಉದ್ಧಟತನ ...ನೀನೇ ಅದನ್ನು ವಿವರಿಸು ನೋಡೋಣ ಎಂದರು". ಆಗ ವಿಜಯದಾಸರು ಅಲ್ಲಿಯೇ ಸಭೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮೂಗ ಹುಡುಗನನ್ನು ಕರೆದು ಅವನ ತಲೆಯ ಮೇಲೆ ಕೈ ಇಟ್ಟು ಶ್ಲೋಕದ ಅರ್ಥ ವಿವರಿಸು ಎಂದರು. ಆ ಹುಡುಗ ಕಠಿಣ ಶ್ಲೋಕದೊಂದಿಗೆ ಆಚಾರ್ಯರು ೭ ದಿನ ಮಾಡಿದ್ದ ಸಂಪೂರ್ಣ ಸುಧಾ ಪಾಠವನ್ನೂ ಹೇಳಿದನು. ಈಡಿ ಸಭೆ ದಿಗ್ಬ್ರಮೆಗೊಂಡಿತು. ಅದೇ ಸಮಯಕ್ಕೆ "ಆದೋನಿಯ ದೀವಾನರು" ಅಲ್ಲಿಗೆ ಆಗಮಿಸಿದರು. ಆಚಾರ್ಯರು ಭರದಿಂದ ಹೋಗಿ ಅವರನ್ನು ಸ್ವಾಗತಿಸಿ ಬಂದ ಕಾರಣವನ್ನು ಕೇಳಿದಾಗ "ವಿಜಯದಾಸರ ದರುಶನಕೆ ಬಂದಿರುವುದಾಗಿ ತಿಳಿಸದರು". ದಿವಾನರು ವಿಜಯದಾಸರ ಶಿಷ್ಯರಲ್ಲೊಬ್ಬರು. ಆಚಾರ್ಯರು "ವಿಜಯದಾಸರು ಸಭೆಯಲ್ಲಿರುವರೇ  ಎಂದು ಆಶ್ಚರ್ಯದಿಂದ ಕೇಳಿದರು".  ಅಡಿಗೆ ಮಾಡಲು ಬಂದವರೇ ವಿಜಯದಾಸರೆಂದು ತಿಳಿದಾಗ ತಮ್ಮ ತಪ್ಪಿನ ಅರಿವು ಅವರಿಗಾಯಿತು. ಕೂಡಲೇ ಅವರ ಚರಣಕ್ಕೆರಗಿ ಶಿಷ್ಯನನ್ನಾಗಿ ಮಾಡಿಕೊಳ್ಳುವಂತೆ ಕೋರಿದರು. "ವ್ಯಾಸ ವಿಠ್ಠಲ " ಎಂಬ ಅಂಕಿತ ನಾಮವನ್ನು ಪಡೆದರು. ವಿಜಯ ರಾಯರ ಕವಚ "ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೊ.... " ವನ್ನ್ನು ರಚಿಸಿದರು.
                           ವಿಜಯದಾಸರು ಒಮ್ಮೆ ತಿರುಪತಿಗೆ ಹೋದಾಗ ಭಕ್ತರ ಮಹಾಪೂರವೇ ಸೇರಿತ್ತಂತೆ. ದರುಶನ ಸಿಗುವುದೇ ಕಷ್ಟವೆನಿಸಿತಂತೆ.  ಸಮೂಹವನ್ನು ನೋಡಿ ದಾಸರು "ನಿನ್ನ ದರುಶನಕೆ ಬಂದವನಲ್ಲವೋ ...... "  ಎಂಬ ಕೃತಿಯನ್ನು ರಚಿಸಿದರು
                          ವಿಜಯದಾಸರಿಂದ ಇನ್ನೂ ಇಂತಹ ಹತ್ತು ಹಲವು ಸತ್ಕಾರ್ಯಗಳು ನಡೆಯಲೆಂದು ದೇವರು ಅವರಿಗೆ ದರುಶನ ನೀಡಲು ವಿಳಂಬ ಮಾಡುತ್ತಿದ್ದನು. ಇದರಿಂದ ಬೇಸತ್ತ ವಿಜಯದಾಸರು ಒಂದು ಕೃತಿಯನ್ನು ಒಂದು ಕಾಗದದಲ್ಲಿ ಬರೆದು ಗೋಪಾಲದಾಸರಿಗೆ ಕೊಟ್ಟರು. ಅದನ್ನು ತಿರುಪತಿಯ ತಿಮ್ಮಪ್ಪನ ರಥದ ಗಾಲಿಯ ಕೆಳಗಿಡುವಂತೆ ಹೇಳಿದರು. ಆಗ ರಥ ಎಳೆಯಲೇ ಆಗಲಿಲ್ಲ. ವಿಜಯದಾಸರೇ ಬಂದ ಮೇಲೆ ರಥ ಮುನ್ನಡೆಯಿತು.
                    ೭೩ ನೇ  ವಯಸ್ಸಿನಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆಯಲು ಚಿಪ್ಪಗಿರಿಗೆ ಆಗಮಿಸಿದರು. ಭಾಸ್ಕರ ಕ್ಷೇತ್ರ, ಸೂರ್ಯ ನಾರಾಯಣ ತಪಸ್ಸು ಮಾಡಿದ ಕ್ಷೇತ್ರ ಅದು. ಭೋಗೆಶ್ವರ ಅಲ್ಲಿನ ಭೂಮಿ ಒಡೆಯ. ಅವನಿಂದ ಅಪ್ಪಣೆ ಪಡೆದರು. ಅಲ್ಲಿನ ಭೋಗೆಶ್ವರ ದೇಗುಲದಲ್ಲಿಯೇ ವಿಜಯದಾಸರು "ಕೈಲಾಸವಾಸ ಗೌರೀಶ ಈಶ ..... " ಕ್ರತಿಯನ್ನು ರಚಿಸಿದ್ದಾರೆ.  
 

                               ವಿಜಯದಾಸರು ಚಿಪ್ಪಗಿರಿಯಲ್ಲಿದ್ದ ಒಂದು ಸಣ್ಣ ನೀರಿನ ಕುಣಿಗೆ ಪ್ರತಿನಿತ್ಯ ಪ್ರದಕ್ಷಿಣೆ ಹಾಕುತ್ತಿದ್ದರು.
ಇದನ್ನು ನೋಡಿದ ಕುರುಬನೊಬ್ಬ "ಅಯ್ಯಾ .... ನೀವು ನನ್ನ ಕುರಿಯ ನೀರಿನ ಕುಣಿಗೇಕೆ ನಿತ್ಯ ಪ್ರದಕ್ಷಿಣೆ  ಹಾಕುತ್ತಿರಿ? ಎಂದು ಕೇಳಿದನು". ಅದಕ್ಕೆ ದಾಸರು ಇದರಲ್ಲಿ ನಮ್ಮ ದೇವರಿದ್ದಾರೆ ಎಂದರು. ಅದಕ್ಕೆ ಆ ಕುರುಬನು "ನಮ್ಮ ತಾತ ಮುತ್ತಾತರ ಕಾಲದಿಂದ ಈ ಭೂಮಿ ನಮ್ಮದಾಗಿದೆ. ನಾವು ಎಂದೂ ಇಲ್ಲಿ ದೇವರನ್ನು ಕಂಡೇ ಇಲ್ಲ ಎಂದನು". ಆ ಕುಣಿಯನ್ನು ಅಗೆದು ನೋಡಿದರೆ "ವೇಣುಗೋಪಾಲನ ವಿಗ್ರಹ" ದೊರೆಯಿತು. ಅಚ್ಚರಿಗೆ ಒಳಗಾದ ಕುರುಬ ೨೨ ಎಕರೆ ಭೂಮಿಯನ್ನು ದಾಸರಿಗೆ ಅರ್ಪಿಸಿದನು.
                        ಒಮ್ಮೆ ವಿಜಯದಾಸರು ಶಿಷ್ಯ ಶೇಷದಾಸರ ಕನಸಿನಲ್ಲಿ ಬಂದು ತಮ್ಮ ದೇಹ ತ್ಯಾಗ ಮಾಡುವ ಸಂಕಲ್ಪದ ಬಗ್ಗೆ ಹೇಳಿದರು. ಕಾರ್ತಿಕ ಶುದ್ಧ ದಶಮಿ ದಿನದಂದು ದೇಹ ತ್ಯಾಗ ಮಾಡುವುದಾಗಿ, ಅವರ ಕಟ್ಟೆಯನ್ನು ಕಟ್ಟಿ ಅದರ ಮೇಲೆ ವೇಣುಗೋಪಾಲನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ತಿಳಿಸಿದರು. ಹೀಗೆ ತಮ್ಮ ಮೇಲೆ ಪರಮಾತ್ಮನ ಪೂಜಾ ಕೈಂಕರ್ಯಗಳು ನಡೆಯುವುದರಿಂದ ತಮಗೆ ಮುಕ್ತಿ ದೊರಕುತ್ತದೆ ಎಂಬುದು ಅವರ ಇಂಗಿತವಾಗಿತ್ತು. ಅವರ ಇಚ್ಚೆಯಂತೆ ಶೇಷದಾಸರು ಅವರ ಕಟ್ಟೆಯನ್ನು ಕಟ್ಟಿಸಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಇದಾದ ಕೆಲವು ದಿನಗಳಲ್ಲಿ ವಿಜಯದಾಸರು ಶೇಷದಾಸರ ಕನಸಿನಲ್ಲಿ ಬಂದು ತಮಗೆ ತಲೆ ಬೇನೆ ಶುರುವಾಗಿರುವುದಾಗಿ ಹೇಳಿದರು. ಕಾರಣ ವಿಚಾರಿಸಿದಾಗ, ಪರಮಾತ್ಮನ ಮೂರ್ತಿಗೆ ಮೇಲ್ಛಾವಣಿ ಇಲ್ಲದಿರುವುದೇ ಅವರ ಚಿಂತೆಗೆ ಕಾರಣವೆಂದರು. ಅದಕ್ಕಾಗಿ ಶೇಷದಾಸರು ವೇಣುಗೋಪಾಲನಿಗೆ ಛಾವಣಿಯನ್ನು ಬೃಂದಾವನ ಆಕಾರದಲ್ಲಿ  ಕಟ್ಟಿಸಿದರು. ಚಿಪ್ಪಗಿರಿಯಲ್ಲಿ ವಿಜಯದಾಸರ ಕಟ್ಟೆ  ಅದೇ ಮಾದರಿಯಲ್ಲಿ ನಿರ್ಮಿತವಾಗಿದೆ.
                          ವಿಜಯದಾಸರ ಸಾಕುಮಗನಾದ ಮೋಹನದಾಸರು "ನನಗೂ ನಿಮ್ಮ ಸೇವೆಯ ಅವಕಾಶ ಕೊಡಿ ಎಂದು ಕೇಳಿದಾಗ"...ವಿಜಯದಾಸರು "ನೀನು ನನ್ನ ಕಟ್ಟೆ ಕಾಯಿ ನಾನು ನಿನ್ನ ಹೊಟ್ಟೆ ಕಾಯುತ್ತೇನೆ" ಎಂದರು.  ಈಗಲೂ ಮೋಹನದಾಸರ ವಂಶಸ್ಥರೇ ಚಿಪ್ಪಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ






ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು 
ಮನ್ನಿಸುವರೊ ಮಹಾರಾಯ
ಚಿಪ್ಪಗಿರಿಯಲ್ಲಿ ಮೋಹನದಾಸರ ವಂಶಸ್ಥರು ನಮಗೆ ವಿಜಯದಾಸರ ಬಗ್ಗೆ ತಿಳಿಸಿದ್ದಕ್ಕಾಗಿ  ಅವರಿಗೆ  ಹೃತ್ಪೂರ್ವಕ ಧನ್ಯವಾದಗಳು. ವಿಜಯದಾಸರ ಬಗ್ಗೆ ನಾವು ಕೇಳಿ ತಿಳಿದಷ್ಟು ಮಾಹಿತಿಯನ್ನು ಇಲ್ಲಿ ವ್ಯಕ್ತಪಡಿಸಿದ್ದೇವೆ. ಬಹುಶಃ ಈ ಲೇಖನ ಅವರ ಜೀವನದ ಚಿಕ್ಕ ತುಣುಕಷ್ಟೇ. ಏನಾದರು ತಪ್ಪಿದ್ದಲ್ಲಿ ಕ್ಷಮಿಸಿ. ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಿಸ್ಸಂಕೋಚವಾಗಿ ತಿಳಿಸಿ.

                    

Thursday, April 24, 2014

Hosahejje....Mareyada AnubhavagaLu

        ನಮ್ಮ ಮದುವೆಯಾದ ಕೆಲವು ದಿನಗಳಲ್ಲೇ ನಡೆದ ಘಟನೆ ಇದು. ಸಹನಾ ನನ್ನನ್ನ ಮಾಮಿ, ಮಾಮಿ ಎಂದು ಸಂಭೋದಿಸಿ ಕರೆಯುತ್ತಿದ್ದಳು. ನಾನು ಓಗೋಡದಿದ್ದಾಗ "ನೀವು ನನಗ ಮಾಮಿ ಆಗಬೇಕು " ಅಂದಳು..... ಸಂಬಂಧಗಳಿಗೆ ವಯಸ್ಸಿನ ಪರಿಮಿತಿ ಇಲ್ಲ. ಸಹನಾ ನನಗಿಂತ ಕೆಲವೇ ವರ್ಷ ಚಿಕ್ಕವಳಾದರೂ ನಾನು ಅವಳಿಗೆ ಮಾಮಿ. :) "ಬಾಳ ಸಂಗಾತಿ" ಯ ಸಂಬಂಧದ ಜೊತೆಗೆ ನಾನು ಈಗ ಮಾಮಿ, ಕಾಕು, ವೈನಿ....  ಎಂಬ ಅರಿವು ಅಂದು ಆಯಿತು :)
         ಹೊಸ ಪರಿವಾರದವರು ನವವಧುವಿಗೆ ತಮ್ಮ ನೆಂಟರಿಷ್ಟರು ಯಾರು, ಎಲ್ಲಿರ್ತಾರೆ ಅಂತ ಪರಿಚಯ ಮಾಡಿಸಿಕೊಡುವುದು ರೂಢಿ. ನಾನೂ ಕುತೂಹಲದಿ೦ದ ಪ್ರತಿ ಸಮಾರಂಭದಲ್ಲೂ ಅವ್ರ್ಯಾರು ಇವ್ರ್ಯಾರು ಅಂತ ನನ್ನಷ್ಟಕ್ಕೆ ನಾನೇ ಗುರುತಿಸಿ ಮಾತಾಡಿಸಲು ಪ್ರಯತ್ನಿಸುತ್ತಿದ್ದಿನಿ
         ಹೀಗಿರುವಾಗ ೪ ಪೀಳಿಗೆಯ ಜನ ಒಂದೆಡೆ ಒಗ್ಗೂಡುವ ವಿಷಯವೇ ನನ್ನಲ್ಲಿ ಉತ್ಸಾಹ ಮೂಡಿಸಿತು. ಒ೦ದು ಪೀಳಿಗೆಯ ಜನರೇ ಸಂಪರ್ಕದಲ್ಲಿ ಇಲ್ಲದಿರುವ ಈ ಕಾಲದಲ್ಲಿ ತಮ್ಮಣ್ಣಜ್ಜನ ವಂಶವೃಕ್ಷದ ಒಂದು "ಎಲೆ" ನಾನದೆನಲ್ಲ ಅನ್ನೋ ಖುಷಿ ನನಗಾಯ್ತು.
        ಎಪ್ರಿಲ್ ೧೭ ಎಲ್ಲರೂ ಜವಬ್ದಾರಿಯೂತ ಪ್ರಜೆಯಂತೆ ಮತದಾನ ಮಾಡಿ ಉಡುಪಿಗೆ ಹೊರಡುವ ಸಿದ್ಧತೆ ಮಾಡಿಕೊಂಡೆವು. ನಿಗದಿತ ಸಮಯಕ್ಕೆ K.S.R.T.C ಬಸ್ ನಲ್ಲಿ ನಮ್ಮ ಪ್ರಯಾಣ ಆರಂಭವಾಯಿತು. ಬಸ್ ನಲ್ಲ್ಲಿ ಮುಕ್ಕಾಲು ಭಾಗ ನಾವೇ ಇದ್ದಿದ್ದರಿಂದ ಪಾಪ ಬಸ್ ಚಾಲಕ, ನಿರ್ವಾಹಕರಿಬ್ಬರು  ಕಕ್ಕಾಬಿಕ್ಕಿ ಆದದ್ದಂತು ಹೌದು. :)
         ಸೀಟ್ ನಿಂದ ಸೀಟ್ ಗೆ ಅವಲಕ್ಕಿ, ಫೇಡೆ, ನೀರು ಇತ್ಯಾದಿಗಳ ಸರಬರಾಜು, ಆ ಮೂಲೆ ಇಂದ ಈ ಮೂಲೆಗೆ ಉಭಯ ಕುಶಲೊಪರಿ, ನಮ್ಮ ಗಲಾಟೆ ಇಂದ ಬೆರೆಳೆಣಿಕೆಯ ಸಹಪ್ರಯಾಣಿಕರು ಕಸಿವಿಸಿ ಆದದ್ದು ಉಂಟು. ಎಷ್ಟೇ ಅದರೂ "ಉತ್ತರ ಕರ್ನಾಟಕ " brand ಹೋಗಲ್ಲ. :) "ನದಿಯಲ್ಲಿ ಮುಳುಗುವವಗೆ ಹುಲ್ಲು ಖಡ್ಡಿಯೂ ಆಧಾರವಾಗುವಂತೆ" ಮೇಲಿನ ಸೀಟ್ನಲ್ಲಿದ್ದವರಿಗೆ ಸಣ್ಣ ಮೆಟಲ್ ಬಾರ್ ಆಧಾರವಾಗಿತ್ತು.:) ಹುರುಪಿನ ಪ್ರಯಣದೊಂದಿಗೆ ಬೆಳಗಿನ ಜಾವ ೬.೩೦ ಗೆ ಉಡುಪಿ ಸೇರಿದೆವು.
        ಉತ್ತರಾಧಿ ಮಠದಲ್ಲಿ ವಾಸ. ಭೀಮಣ್ಣಜ್ಜ ದಂಪತಿಗಳು, ವಾಮಣ್ಣಜ್ಜ ಕುಟುಂಬ,ಪಲ್ಲಣ್ಣಜ್ಜ ಕುಟುಂಬ, ಮಧ್ವೇಶ ಮಾಮ ಕುಟುಂಬ ಅಲ್ಲೇ ನಮ್ಮ ಗುಂಪನ್ನು ಸೇರಿದರು. ಎಲ್ಲರೂ ತಮ್ಮ ತಮ್ಮ ಪ್ರಾತಃ ಕರ್ಮಗಳನ್ನು ಮುಗಿಸಿ ಶ್ರೀಕೃಷ್ಣನ ದರ್ಶನ ಪಡೆಯುವುದಕ್ಕೆ ಮೊದಲಾದರು. ಕೆಲವರು ಮಧ್ವ ಸರೋವರದಲ್ಲಿ ಮಿಂದು, ಸಂಧ್ಯಾವಂದನಾದಿಗಳನ್ನು ಮುಗಿಸಿ ಪರಮಾತ್ಮನ ದರ್ಶನ ಪಡೆದರು. ಕಡಗೋಲು ಕೃಷ್ಣನನ್ನು ಮನದಣಿಯೆ ನೋಡಿದರೂ ಇನ್ನೂ ನೋಡಬೇಕೆಂಬ ಹಂಬಲ. ಅದಕ್ಕೆ ಪೂರಕವೆಂಬಂತೆ ನಮ್ಮ "ಮನ್ಯು" ಬೆಳಿಗ್ಗೆ ಹೋದವನು ಸರದಿಯಲ್ಲಿ ನಿರಂತರ ದರ್ಶನ ಮಾಡುತ್ತಲೇ ಇದ್ದ.
        ಮಠದಲ್ಲಿ ವಾಸ, ಶ್ರೀಕೃಷ್ಣ ಮಠದ ಚೌಕಿ ಊಟ ಇದೆಲ್ಲ ನನಗೆ ಹೊಸ ಅನುಭವಗಳು. ಮಧ್ಯಾಹ್ನದ ಚೌಕಿ ಊಟಕ್ಕೆ ತೆರಳುವಾಗ "ಸ್ನೇಹಾ" ಒಂದು ಕಿವಿಮಾತು ಹೇಳಿದಳು. "ವೈನಿ ಚೌಕಿ ಊಟದಾಗ ಬಹಳ ವಿಧ ವಿಧ ಪಕ್ವಾನ ಇರ್ತಾವ, ಎಲ್ಲ ಟೇಸ್ಟ್ ಮಾಡ್ರೀ ". ಅವಳು ಹೇಳಿದ್ದು ಅಕ್ಷರಶಃ ನಿಜ. ನನಗೆ ಉಡುಪಿಗೆ ಹೋದಾಗಲೆಲ್ಲ ಒಂದು ಪ್ರಶ್ನೆ ಬರುತಿತ್ತು ("ಬದನೆಕಾಯಿ ನಿಶಿದ್ಧ ಆದರೆ ಉಡುಪಿಯಲ್ಲಿ ಮಾತ್ರ ಯಾಕೆ ಅದನ್ನ ಅಡಿಗೆಗೆ ಬಳಸ್ತಾರೆ ಅಂತ "). ಆದರೆ ಅದಕ್ಕೆ ಉತ್ತರ ಹುಡುಕುವ ಪ್ರಯತ್ನ ನಾನು ಮಾಡಿರಲಿಲ್ಲ. ಮಧ್ಯಾಹ್ನ ಹರಟೆಯ ಸಮಯದಲ್ಲಿ "ಮಂಜು ಅಕ್ಕಾ " ಗೆ ಕೇಳಿದಾಗ ಗುಳ್ಳದ ಕಥೆ ತಿಳಿಯಿತು. ಗುಳ್ಳಕ್ಕೆ ಉಡುಪಿಯಲ್ಲಿ exception ಇರುವಂತೆ ರಾಯರ ಮಠದಲ್ಲಿ ಚಾತುರ್ಮಾಸ ವೃತದ ಕಾಲದಲ್ಲಿ ಸಾಸಿವೆಗೆ exception ಇರುವ ಕಥೆ "ನಮ್ಮ ಮನೆಯವರಿಂದ" ತಿಳಿದೆ.
         ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಚಹಾ, ಪಾನೀಯ ನಂತರ ಮಲ್ಫೆ ಬೀಚ್ ಗೆ ಹೋಗುವ ನಿರ್ಧಾರವಯಿತು. ಕೆಲವರು ಸಮುದ್ರ ಸ್ನಾನದಿಂದ, ಕೆಲವರು ಸಮುದ್ರ ದಂಡೆ ಯಾತ್ರೆ ಇಂದ ಇನ್ನೂ ಕೆಲವರು enjoy ಮಾಡುವವರನ್ನು ನೊಡಿ ತಾವು ಖುಷಿ ಪಟ್ಟರು. ಉಡುಪಿಗೆ ಮರಳಿ ರಥೋತ್ಸವ, ಕಾಣಿಯೂರು ಮಠದಲ್ಲಿ ಪ್ರಸಾದ ಸೇವಿಸಿ ಎಲ್ಲರೂ ನಿದ್ರಾದೇವಿಯ ಆಹ್ವಾನಕ್ಕೆ ಓಗೊಟ್ಟರು.
 

 ಮರುದಿನ ಬೆಳಿಗ್ಗೆ ನೀಲಾವರಕ್ಕೆ ಪ್ರಯಾಣ ನಿರ್ಧಾರವಾಗಿತ್ತು. ಬೆಳಗಿನ ಜಾವ ರಾಘು ಮಾಮ,ಶೋಭಾ ಅಕ್ಕಾ , ಪ್ರತಿಭಾ ಅಕ್ಕಾ ಅವರ ಕುಟುಂಬವು ಗುಂಪನ್ನು ಸೇರಿತು. ಎಲ್ಲರಿಗೂ  ಒಮ್ಮೆ ಶ್ರೀಕೃಷ್ಣನ ದರ್ಶನ ಪಡೆದ ನಂತರವೇ ಪ್ರಯಾಣ ಬೆಳೆಸುವ ಆಸೆ. ಅದೇ ನಿಟ್ಟಿನಲ್ಲಿ ಎಲ್ಲರೂ ತಮ್ಮ ನಿತ್ಯಕರ್ಮಗಳಲ್ಲಿ ತೊಡಗಿದ್ದರು.
           ನಾವು ದರ್ಶನಕ್ಕೆ ತೆರಳಿದಾಗ ದೇವರ ಅಲಂಕಾರ ಸೇವೆ ಹಾಗು ಪಲಿಮಾರು ಮಠದ ಶ್ರೀಗಳು ಪ್ರದಕ್ಷಿಣೆ ಹಾಕುತ್ತಿದ್ದರಿಂದ ನಮಗೆ ಬದಿಗೆ ನಿಲ್ಲುವಂತೆ ಮಠದ ಸಿಬ್ಬಂಧಿ ಹೇಳಿದರು. ಸರದಿಯಲ್ಲಿದ್ದ ಎಲ್ಲರೂ ಯಾವಾಗ ದರ್ಶನವಾದಿತೋ, ಈ ಸೆಕೆ, ಎಲ್ಲಿ ನನ್ನ ಬಸ್ ತಪ್ಪಿ ಹೋದಿತೋ ಅನ್ನುವ ವಿವಿಧ ಭಾವನೆಗಳನ್ನು ಹೊತ್ತು ಕಾಯುತ್ತಿದ್ದರು. ಏತನ್ಮಧ್ಯೆ ಒಬ್ಬ "ಮಡಿ ಅಜ್ಜಿ" ಯಾರ ಭಯವೂ ಇಲ್ಲದೆ, ಮುಖದಲ್ಲಿ ಯಾವ ಅವಿಶ್ವಾಸವೂ ಇಲ್ಲದೇ, ಶಾಂತವಾಗಿ ಬಾಗಿದ ದೇಹದೊಂದಿಗೆ ಒಂದು ಕೋಲು ಹಿಡಿದು ಕೃಷ್ಣ ಮಂತ್ರ ಜಪಿಸುತ್ತ ಪ್ರದಕ್ಷಿಣೆ ಹಾಕುತ್ತಿದ್ದಳು. ಆ ಜನಜಾತ್ರೆಯಲ್ಲಿ ಏಕಚಿತ್ತವನ್ನು ಸಾಧಿಸುವುದು ತನ್ನಲ್ಲೇ ಒಂದು ಸಾಧನೆ.
            ದರ್ಶನಕ್ಕೆ ೪೦ ಜನ ಗುಂಪಿನವರು ಒಟ್ಟಿಗೆ ಹೋಗುವುದು ಕಷ್ಟ ಸಾಧ್ಯ. ಅವರವರದೇ ಚಿಕ್ಕ ಚಿಕ್ಕ ಗುಂಪುಗಳಲ್ಲಿ ತೆರಳಿ ದರ್ಶನ ಪಡೆದೆವು. ಪರಸ್ಥಳದಲ್ಲಿ ನಮ್ಮವರನ್ನು ಮಾರ್ಗ ಮಧ್ಯೆ ಸಂಧಿಸಿದಾಗ ಏನೋ ಖುಷಿ!!!!:)
           ನೀಲಾವರದ ಕಡೆಗೆ ನಮ್ಮ ಪ್ರಯಾಣ ಆರಂಭವಾಯಿತು. ದಾರಿ ಮಧ್ಯೆ ನಗೆ ಚಟಾಕಿಗಳು, ಹಳೆಯ ಬಾಲ್ಯದ ನೆನಪುಗಳು, ಪ್ರಥಮ್, ಸಮರ್ಥ ರ ಮಾತುಗಳು, ನವ ದಂಪತಿಗಳಾದ ನಮ್ಮನ್ನು ಕಾಡಿಸುವುದು, ಗುಂಪಿನಲ್ಲಿ ೩ ಜನ "ವಿಜು" ಇದ್ದಿದ್ದರಿಂದ ಯಾರೇ "ವಿಜು" ಎಂದು ಕೂಗಿದಾಗಲೂ ೩ "ಓ" ಅನ್ನೋ ಉತ್ತರಗಳು ಬರುತ್ತಿದ್ದದ್ದು .....  ಮನ ರಂಜಿಸಿದವು. :)
           ಒಂದು ದೊಡ್ಡ ಗೋವಿನ ಗುಂಪು ನಮ್ಮನ್ನು ಸ್ವಾಗತಿಸಿತು. ಆ ರಮ್ಯ ತಾಣ, ಕಾಳಿಂಗ ಮರ್ದನ ಕೃಷ್ಣನ ದೇಗುಲ, ಗೋವುಗಳ ಹಂಬಾ ಧ್ವನಿ, ನವಿಲಿನ ಹಾರಾಟ, ಮಂತ್ರಗಳ ನಿನಾದ, ಗೋದಾನ,  ಒಂದು ದಿನದ ಕರುವಿಗೆ ಲೋಟದಿಂದ ಹಾಲು ಕುಡಿಸುವ ದೃಶ್ಯ, ನಮಗೆ ಮಾರ್ಗ ಮಧ್ಯೆ ಶ್ರೀಗಳ ಮುಖಾಮುಖಿ ಆಗಿ ಆವರು ನಮ್ಮ ಯೋಗಕ್ಷೇಮ ವಿಚಾರಿಸಿದರು. ತೀರ್ಥ ಪ್ರಸಾದ ಸ್ವೀಕರಿಸಿ ಹೋಗುವಂತೆ ಹೇಳಿದರು. ಶ್ರೀಗಳಿಂದ ಪೂಜೆ, ಪ್ರವಚನ, ಆಶೀರ್ವಾದ, ತಂಬುಳಿ ಹೋಳಿಗೆ ಕಾಯಿ ಹಾಲಿನ ಸ್ವಾದ.... .ಮನಸ್ಸು ಪ್ರಸನ್ನವಾಯಿತು
 

 


          ಜಯಮ್ಮಆಂಟಿ, ಮಂಜು ಅಕ್ಕ ನಿತ್ಯ ದೇವರ ಮುಂದೆ ಹಾಕುವ ರಂಗೋಲಿಯನ್ನು ಹೇಳಿಕೊಟ್ಟರು. ಜಯಮ್ಮಆಂಟಿ "ಆಂಜನೇಯನನ್ನು" ರಂಗೋಲಿಯಲ್ಲಿ ಬಿಡಿಸುವ ಸರಳ ವಿಧಾನವನ್ನು ಹೇಳಿಕೊಟ್ಟರು.  ಶ್ರೀಗಳ ಮಂದಸ್ಮಿತ ಭಾವ ನಮ್ಮಲ್ಲಿ ನವ ಉತ್ಸಾಹವನ್ನು ತುಂಬಿತು. ಅಜ್ಜ ಇಂದ ಹಿಡಿದು ಸಮರ್ಥನ ವಯೋಮಿತಿಯವರು ಅವರ ಸೇವೆ ಮಾಡಿ ಪುನೀತರಾದರು.
            ಅಲ್ಲಿಂದ ಹೊರಟ ನಮ್ಮ ಸವಾರಿ ಕುಂಭಾಷಿ, ಹೂವಿನಕೆರೆ, ಕೋಟಿಲಿಂಗೇಶ್ವರ, ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದ ಕಡೆ ಪ್ರಯಾಣ ಬೆಳಸಿದೆವು. ಹೂವಿನಕೆರೆಯಲ್ಲಿ ವಾದಿರಾಜರ ಜನ್ಮಸ್ಥಳ. ಅಲ್ಲಿಯ ಅರ್ಚಕರಿಂದ ವಾದಿರಾಜ ಸ್ವಾಮಿಗಳ ಬಗ್ಗೆ, ಗೌರಿ ಗದ್ದೆ, ಅವರು ಆಟವಾಡಿದ ಸ್ಥಳ, ಗುಳ್ಳದ ಕಥೆ ಯನ್ನು ತಿಳಿದೆವು.
             ಮುಂದಿನ ನಮ್ಮ ಪ್ರಯಾಣ ಪಾಜಕದ ಕಡೆ ಸಾಗಿತು. "ಕರಾವಳಿ ಅಂದ ಮೇಲೆ ಮೀನಿನ ವಾಸನೆ ಬರದೆ ಇರುವುದೇ" :) ಬಸ್ನಲ್ಲಿದ್ದ ಎಲ್ಲರು ಮೂಗು ಮುಚ್ಚಿಕೊಂಡೆವು. ಪ್ರಥಮ್ ವಾಸನೆ ಇಂದ ಕಸಿವಿಸಿ ಆಗಿ ಯಾವುದರ ವಾಸನೆ ಇದು ಅಂತ ಕೇಳಿದ. ಮಕ್ಕಳ ಒಂದು ಪ್ರಶ್ನೆಗೆ ಉತ್ತರ ಕೊಟ್ಟರೆ, ಪ್ರಶ್ನೆಗಳ ಸುರಿಮಳೆ ಆರಂಭ ಅಂತಾನೆ ಅರ್ಥ. ಆದರೂ ಆ ಪುಟ್ಟ ಮೆದುಳು ಎಷ್ಟು ಯೋಚನೆ ಮಾಡುತ್ತದೆ ಅಂತ ಆಶ್ಚರ್ಯ ಆಯಿತು. ಅದು ಮೀನದ ವಾಸನೆ ಅಂತ ತಿಳಿದಾಕ್ಷಣ "ಮೀನಾ ಯಾಕ ಇಲ್ಲಿರ್ತದ? ಮತ್ತ ಅದನ್ನ ಯಾಕ ತಿಂತಾರ? ಮತ್ತ ಅದಕ್ಕ ಜೀವ ಇರ್ತದಲ ಹೆಂಗ್ ತಿಂತಾರ? ಯಾಕ್ ಇಲ್ಲಿ ಮಂದಿ ಸಾರು ಅನ್ನ, ಮೊಸರು ಅನ್ನ ತಿನ್ನಂಗಿಲ್ಲ? ಪಲ್ಯ, ಸಾರು ಎಲ್ಲ ಅದರಲ್ಲೇನ ಮಾಡ್ತಾರ?" ಅಬ್ಬ....ಮೀನು ಕೇಳಸ್ಕೊಂಡಿದ್ರ ಅದುನೂ ಮಾತಾಡಿಬಿಡ್ತಿತ್ತು. :) ಮಾತಿನ ಮಧ್ಯೆ ದಾರಿ ಸವಿದಿದ್ದೆ ಗೊತ್ತಾಗಲಿಲ್ಲ. ಸೆಕೆ, ಪ್ರಯಾಣದಿಂದ ಎಲ್ಲರೂ ಬಸವಳಿದಿದ್ದರೂ ಹಿರಿಯ ಸದಸ್ಯರು ಮಾತ್ರ ಉತ್ಸಾಹದಿಂದ ಇದ್ದಿದ್ದು ನೋಡಿ ಖುಷಿ ಆಯಿತು. ಪಾಜಕ ತಲುಪಿ, ದಣಿವಾರಿಸಿಕೊಂಡು ಭೋಜನ ಮುಗಿಸಿ ನಿದ್ದೆಗಿಳಿದೆವು.
         ಮರುದಿನ ಬೆಳಿಗ್ಗೆ ಪಾಜಕದ ಪುಷ್ಕರ್ಣಿಯಲ್ಲಿ ಸ್ನಾನ. ಜಯಮ್ಮ ಆಂಟಿ ನಮಗೆಲ್ಲ ನದಿ ಸಂಕಲ್ಪದ ವಿಧಿ ವಿಧಾನಗಳನ್ನು ತಿಳಿಸಿದರು.
     
     
            ಪುರುಷರೆಲ್ಲರೂ ಮಧ್ವ ಮಂಟಪದಲ್ಲಿ ವಾಯುಸ್ತುತಿ ಪುರಶ್ಚರಣನವನ್ನು ಮಾಡಿದರು.

    ತದನಂತರ ಫಲಾಹಾರ. ತರುವಾಯ ಪೂರ್ಣ ಸಭೆಯನ್ನು ಸೇರಿಸಿ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು,
ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ರೂಪಿಸಲಾಯಿತು. ಅಜ್ಜಾ, ಭೀಮಣ್ಣಜ್ಜಾ ರಿಂದ ತಮ್ಮಣ್ಣಜ್ಜನ ವ್ಯಕ್ತಿತ್ವದ ಕಿರು ಪರಿಚಯ ನನಗಾಯ್ತು. ಅಜ್ಜಾ ಹೇಳಿದ ಸುಭಾಷಿತಗಳು, ಧರ್ಮಾಚರಣೆಯ ಕುರಿತಾಗಿ ಭೀಮಣ್ಣಜ್ಜ, ಮಧ್ವೇಶ ಮಾಮ, ಸುರೇಶ ಮಾಮ ಹೇಳಿದ ಸಲಹೆಗಳು ನಮ್ಮಲ್ಲಿ ಪರಿವರ್ತನೆಯನ್ನು ತಂದುಕೊಳ್ಳಲು ನಾಂದಿ ಆದವು.
 

     ಭೋಜನ ತರುವಾಯ ಸೌಮ್ಯ ಮಾಮಿ, ಸ್ನೇಹ ಮೊದಲಾದವರಿಂದ ದೇವರ ನಾಮ ಸ್ಮರಣೆಯಾಯಿತು. ನಂತರ ಎಲ್ಲರು ಉಡುಪಿಗೆ ತೆರಳಲು ಸಜ್ಜಾದರು. ಬಸ್ ಗೆ ಕಾಯುತ್ತಿದ್ದ ಸಮಯದಲ್ಲಿ ಮಕ್ಕಳೊಂದಿಗೆ ಸೇರಿ ನಾವು ಚೀಟಿ ಆಟ ಆಡಿದೆವು. ಪಾಜಕದ ಅರ್ಚಕರಿಂದ ಬಿಳ್ಕೊಟ್ಟು "ದುರ್ಗಾ ಬೆಟ್ಟದ" ಕಡೆ ಪ್ರಯಾಣ ಬೆಳಸಿದೆವು. ದರ್ಶನ ಪಡೆದು ಹೆಂಗಸರೆಲ್ಲರೂ ಉಡುಪಿ ಕಡೆಗೆ ಹೊರಟೆವು.
 

           ಗಂಡಸರೆಲ್ಲರೂ ಪರುಶರಾಮ ಬೆಟ್ಟಕ್ಕೆ ಹೋದರು. ಅಲ್ಲಿ ನಡೆದ ಒಂದು ಅಪರೂಪದ ದೃಶ್ಯವನ್ನು  ನಮ್ಮ ಮನೆಯವರು ಹೇಳಿದರು. ಪರಶುರಾಮ ಬೆಟ್ಟದಿಂದ ದುರ್ಗಾ ಬೆಟ್ಟಕ್ಕೆ ಒಂದು ವಾನರ ಸೈನ್ಯ ಹೋಗುತ್ತಿದ್ದ ದೃಶ್ಯ. ನಮ್ಮವರು ವರ್ಣಿಸಿದಂತೆ "ವಾನರ ಸೈನ್ಯ ಶ್ರೀರಾಮನ ಆಜ್ಞೆಯಂತೆ ಸೀತಾ ಮಾತೆಯನ್ನು ನೋಡಲು ಹೊರಟ ಹಾಗೆ ಇತ್ತು."
           ಎಲ್ಲರು ಉಡುಪಿ ತಲುಪಿ ಮತ್ತೊಮ್ಮೆ ಶ್ರೀಕೃಷ್ಣನ ದರ್ಶನ ಪಡೆದು, ಉತ್ತರಾದಿಮಠದಲ್ಲಿ ಪ್ರಸಾದ ಸೇವಿಸಿ, ಹಿರಿಯರಿಗೆ ನಮಸ್ಕಾರ ಮಾಡಿ ಭಾರವಾದ ಮನಸ್ಸಿನಿಂದ ಬೆಂಗಳೂರಿನೆಡೆಗೆ ಹೊರಟೆವು.

           ಈ ಸ್ಮರಣೀಯ ಪ್ರವಾಸಕ್ಕೆ ಕಾರಣೀಭೂತರಾದ ಮಧ್ವೇಶ ಮಾಮ, ಸುರೇಶ ಮಾಮ ಹಾಗು ಮಧು ಮಾಮ ಅವರಿಗೆ ಧನ್ಯವಾದಗಳು.
           ಅಂದು ನನಗೆ ಅನಿಸಿಕೆಯನ್ನು ಹೇಳಲು ಹೇಳಿದಾಗ ಹೇಳಲಾಗಲಿಲ್ಲ. ನಮ್ಮ ಮನೆಯವರ ಪ್ರೋತ್ಸಾಹದಿಂದ ನನ್ನ ಬರಹದ ಮುಖೇನ ನಮ್ಮೀರ್ವರ ಅನಿಸಿಕೆಯನ್ನು ಪ್ರಚೂರ ಪಡಿಸುವ ಸಣ್ಣ ಪ್ರಯತ್ನವನ್ನು ಮಾಡಿದ್ದಿವಿ. ಏನಾದರು ತಪ್ಪಾಗಿದ್ದರೆ ಕ್ಷಮಿಸಿ. ಏನಾದರು ತಿದ್ದುಪಡಿಗಳು ಇದ್ದರೆ ತಿಳಿಸಿ.